ಮಧ್ವಾಚಾರ್ಯ

1238-1317, ದ್ವೈತ ಸಿದ್ಧಾಂತದ ಪ್ರತಿಪಾದಕರು. ಮಾಧ್ವಮತ ಪ್ರವರ್ತಕರು. ಇವರ ಪೂರ್ವಾಶ್ರಮದ ಹೆಸರು ವಾಸುದೇವ. ಉಡುಪಿಯ ಬಳಿ ಕುಂಜಾರು ಬೆಟ್ಟದ ಬದಿಯಲ್ಲಿ ಪಾಜಕ (ಬೆಳ್ಳೆ) ಎಂಬಲ್ಲಿ ಹುಟ್ಟಿದರು.

	ತುಳುನಾಡು ಆ ಕಾಲಕ್ಕೆ ಹಲವಾರು ಧಾರ್ಮಿಕ ಪರಂಪರೆಗಳ ಸಂಗಮಕ್ಷೇತ್ರವೆಂದು ಪ್ರಸಿದ್ಧವಾಗಿದ್ದಿತು. ಭೂತಾರಾಧನೆ, ನಾಗಪೂಜೆ, ಶೈವ, ಜೈನ, ನಾಥ, ಭಾಗವತ ಸಂಪ್ರದಾಯಗಳು ಬೇರೂರಿದ್ದ ಇಲ್ಲಿ ಆಚಾರ್ಯರು ವೈದಿಕ ಧರ್ಮವನ್ನು ಎತ್ತಿಹಿಡಿದು ನಿಲ್ಲಿಸಿದರು. ಉಡುಪಿಯ ಅನಂತೇಶ್ವರ ದೇವಾಲಯ ಸುತ್ತಮುತ್ತಲ ಜನರಿಗೆಲ್ಲ ಪವಿತ್ರವೆನಿಸಿದ್ದಿತು. ಅನಂತೇಶ್ವರನ ಆರಾಧಕರಲ್ಲಿ ಒಬ್ಬರಾದ ಪುರಾಣಿಕ ನಡುಮನೆ ಭಟ್ಟ ಇವರ ತಂದೆ. ಆರಂಭದ ವಿದ್ಯಾಭ್ಯಾಸವನ್ನು ಹಳ್ಳಿಯಲ್ಲಿಯೇ ಮುಗಿಸಿದ ಆಚಾರ್ಯರು ಬ್ರಹ್ಮಜ್ಞಾನದ ಹಂಬಲ ಹೆಚ್ಚಿ ಸಂನ್ಯಾಸಿಯಾಗಿ, ಅನಂತೇಶ್ವರನ ಗುಡಿಯಲ್ಲಿ ತಂಗಿದ್ದ ಅಚ್ಯುತಪ್ರೇಕ್ಷ ಎಂಬುವರಲ್ಲಿ ವೇದಾಂತ ವಿದ್ಯಾಭ್ಯಾಸ ಕೈಗೊಂಡರು. ಸಂನ್ಯಾಸಿಗಳಾದ ಮೇಲೆ ಇವರಿಗೆ ಮಧ್ವಾಚಾರ್ಯ, ಆನಂದತೀರ್ಥ, ಪೂರ್ಣಪ್ರಜ್ಞ ಮೊದಲಾದ ಹೆಸರುಗಳು ಬಂದವು.

ವಿದ್ಯಾಭ್ಯಾಸದ ಅವಧಿಯಲ್ಲಿಯೇ ಆಚಾರ್ಯರಿಗೆ ಆಗ ಸಿದ್ಧಾಂತವೆಂದು ಪ್ರಸಿದ್ಧವಾಗಿದ್ದ ಅದ್ವೈತ ವಿಚಾರದಲ್ಲಿ ಸಂಶಯಗಳು ತಲೆದೋರಿದವು. ಈ ನಿಲುವು ವೇದಶಾಸ್ತ್ರ ಸಮ್ಮತವಲ್ಲವೆಂದು ತೋರಿದಾಗ ಅವರ ವಿದ್ಯಾಗುರುಗಳಿಗೂ ಅವರಿಗೂ ಭಿನ್ನಾಭಿಪ್ರಾಯ ಮೂಡಿತು. ಗುರುಗಳಿಂದಲೂ ಲಿಕುಚ (ಪೇಜತ್ತಾಯ) ವಂಶದ ಹಿರಿಯ ಯತಿಯೊಬ್ಬರಿಂದಲೂ ಪ್ರೇರಿತರಾಗಿ ಆಚಾರ್ಯರು ಭಗವದ್ಗೀತ ಪ್ರಸ್ಥಾನಕ್ಕೆ ತಮ್ಮ ಸಿದ್ಧಾಂತದ ಪ್ರಕಾರ ಭಾಷ್ಯವೊಂದನ್ನು ಬರೆದು ಗುರುಗಳಿಗೆ ಒಪ್ಪಿಸಿ ಉತ್ತರದೇಶದ ಯಾತ್ರೆ ಕೈಗೊಂಡರು. ಹಿಮಾಲಯ ಪ್ರಾಂತ್ಯದ ಬದರಿಕಾಶ್ರಮದಲ್ಲಿ ಬ್ರಹ್ಮಸೂತ್ರಗಳಿಗೆ ದ್ವೈತ ಪರವಾದ ಭಾಷ್ಯಸಿದ್ಧಪಡಿಸಿ ಉಡುಪಿಗೆ ಹಿಂತಿರುಗಿದರು. ಆಗ ಅನಂತೇಶ್ವರನ ಗುಡಿಯ ಸಮೀಪದಲ್ಲಿ ಕೃಷ್ಣನ ಮಂದಿರ ಕಟ್ಟಲು ವ್ಯವಸ್ಥೆ ಮಾಡಿದರು. ಈಗ ಪ್ರಸಿದ್ಧವಾಗಿರುವ ಉಡುಪಿ ಕೃಷ್ಣನ ಗುಡಿ ಇದೇ.

ಮತ್ತೊಮ್ಮೆ ಆಚಾರ್ಯರು ಉತ್ತರ ದೇಶದ ಯಾತ್ರೆ ಕೈಗೊಂಡು ವಾದಿಗಳನ್ನು ನಿಗ್ರಹಿಸಿ, ಎಲ್ಲೆಡೆಯಲ್ಲಿಯೂ ದ್ವೈತ ಸಿದ್ಧಾಂತವನ್ನು ಸಮರ್ಥಿಸಿ, ಶಿಷ್ಯ ಸಂಗ್ರಹ ಮಾಡಿದರು. ಗೋದಾವರೀ ತೀರದಲ್ಲಿ ಶೋಭನಭಟ್ಟ (ಪದ್ಮನಾಭ ತೀರ್ಥ) ಮತ್ತು ಕಳಿಂಗ ಪ್ರಾಂತ್ಯದಲ್ಲಿ ಶ್ಯಾಮಶಾಸ್ತ್ರಿ (ನರಹರಿತಿರ್ಥ) ಇವರಿಬ್ಬರಿಗೂ ಇವರ ಶಿಷ್ಯರಾದರು. ಹೀಗೆ ದೇಶದಲ್ಲೆಲ್ಲ ಸುವಿಖ್ಯಾತರಾಗಿ ದ್ವೈತ ಸಿದ್ಧಾಂತ ಪ್ರವರ್ತಕರಾಗಿ ನೂರಾರು ಪ್ರತಿಭಾಶಾಲಿ ಶಿಷ್ಯರ ಗುರುಗಳಾಗಿ ಹಿಂತಿರುಗಿದ ಮಧ್ವಾಚಾರ್ಯರು ಉಡುಪಿಯ ಅನಂತೇಶ್ವರ ಗುಡಿಯಲ್ಲಿ ಶಿಷ್ಯರಿಗೆ ಪಾಠ ಹೇಳುತ್ತಿದ್ದಾಗ ಮರೆಯಾದರು. ಆಗ ಇವರಿಗೆ ಎಂಬತ್ತು ವರ್ಷ ವಯಸ್ಸು. ತಿರೋಧಾನದ ವರ್ಷ 1317. ಮಾಘ ಶುದ್ಧ ನವಮಿ. ಇದನ್ನು ಮಧ್ವನವಮಿಯೆಂದು ಇವರ ಅನುಯಾಯಿಗಳು ವಿಶೇಷ ಸಂಭ್ರಮದಿಂದ ಆಚರಿಸುವ ಪದ್ಧತಿಯಿದೆ. ನಾರಾಯಣ ಪಂಡಿತಾಚಾರ್ಯರ ಮಧ್ವವಿಜಯ ಮಧ್ವಾಚಾರ್ಯರ ಜೀವನ ಸಾಧನೆಗಳನ್ನು ವಿವರಿಸುವ ಮುಖ್ಯ ಆಧಾರಗ್ರಂಥ. ಇದು ಮಧ್ವಚಾರ್ಯರ ಸ್ವಲ್ಪ ಕಾಲದಲ್ಲೇ ರಚಿತವಾಗಿದ್ದು ಇಲ್ಲಿಯ ವಿವರಗಳು ಬಲುಮಟ್ಟಿಗೆ ಸಾಧಾರಿತವಾದವು ಎಂಬ ನಂಬುಗೆಯಿದೆ.

	ಆಚಾರ್ಯರು ತಮ್ಮ ಸಿದ್ಧಾಂತವನ್ನು ಪ್ರತಿಪಾದಿಸುವ ಮೂವತ್ತೇಳು ಗ್ರಂಥಗಳನ್ನು ರಚಿಸಿದರು. ಇವಕ್ಕೆ ಒಟ್ಟಾಗಿ ಸರ್ವಮೂಲ ಎಂಬ ಹೆಸರಿದೆ. ಬ್ರಹ್ಮಸೂತ್ರ ಪ್ರಸ್ಥಾನದ ಮೇಲೆ ಭಾಷ್ಯ, ಅನುವ್ಯಾಖ್ಯಾನ, ಅನುಭಾಷ್ಯ, ನ್ಯಾಯವಿವರಣ- ಈ ನಾಲ್ಕು ಗ್ರಂಥಗಳು; ಉಪನಿಷತ್ ಪ್ರಸ್ಥಾನದ ಮೇಲೆ ದಶೋಪ ನಿಷದ್ಭಾಷ್ಯಗಳು; ಗೀತಾ ಪ್ರಸ್ಥಾನದ ಮೇಲೆ ಭಗವದ್ಗೀತಾಭಾಷ್ಯ ಮತ್ತು ಗೀತಾ ತಾತ್ಪರ್ಯ ನಿರ್ಣಯ- ಈ ಎರಡು ಗ್ರಂಥಗಳು : ದಶಪ್ರಕರಣಗಳು (ಅಂದರೆ ಪ್ರಮಾಣ ಲಕ್ಷಣ, ಕಥಾಲಕ್ಷಣ, ಉಪಾದಿ ಖಂಡನ, ಮಾಯಾವಾದ ಖಂಡನ, ಪ್ರಪಂಚ ಮಿಥ್ಯಾತ್ವಾನುವಾದ ಖಂಡನ, ತತ್ತ್ವಸಂಖ್ಯಾನ, ತತ್ವೋದ್ಯೋತ. ಕರ್ಮನಿರ್ಣಯ, ವಿಷ್ಣುತತ್ತ್ವನಿರ್ಣಯ, ತತ್ತ್ವವಿವೇಕ,); ಭಾರತ ಮತ್ತು ಭಾಗವತಗಳಿಗೆ ತಾತ್ಪರ್ಯ ನಿರ್ಣಯಗಳು; ಯಮಕಭಾರತ, ಋಗ್ಬಾಷ್ಯ, ಜಯಂತೀ ನಿರ್ಣಯ, ಯತಿಪ್ರಣವಕಲ್ಪ, ಕೃಷ್ಣಾಮೃತಮಹಾರ್ಣವ, ಸದಾಚಾರಸ್ಮøತಿ, ತಂತ್ರಸಾರಸಂಗ್ರಹ, ದ್ವಾದಶಸ್ತೋತ್ರ, ನಖಸ್ತುತಿ- ಇವು ಮಧ್ವಾಚಾರ್ಯರ ಕೃತಿಗಳು.

ಮಧ್ವಾಚಾರ್ಯರ ಸಿದ್ಧಾಂತ ದ್ವೈತವಾದ. ಸ್ವತಂತ್ರನಾದ ಬ್ರಹ್ಮಪರ ತಂತ್ರಗಳಾದ ಜೀವ, ಜಡ ಈ ಎರಡೂ ಬೇರೆಬೇರೆ ತತ್ತ್ವಗಳೆಂಬುದು ಸಿದ್ಧಾಂತದ ಮೂಲ ಅಂಶ. ಇವುಗಳಲ್ಲಿ ಭೇದವನ್ನು ಪ್ರತಿಪಾದಿಸುವುದರಿಂದ ಇವರ ಸಿದ್ಧಾಂತಕ್ಕೆ ಭೇದವಾದವೆಂಬ ಹೆಸರು ಇದೆ. ಜೀವ-ಈಶ್ವರ, ಜೀವ-ಜೀವ, ಜಡ-ಜೀವ, ಜಡ-ಈಶ್ವರ, ಜಡ-ಜಡ ಎಂಬ ಪಂಚಭೇದಗಳು ನಿತ್ಯಸತ್ಯಗಳೆಂಬ ಪ್ರತಿಪಾದನೆಯನ್ನು, ಅದರಲ್ಲೂ ಬಲುಮುಖ್ಯವಾದ ಜೀವ- ಈಶ್ವರ ಭೇದವನ್ನು ಪ್ರತ್ಯಕ್ಷ, ಅನುಮಾನ ಮತ್ತು ಆಗಮ ಪ್ರಮಾಣಗಳಿಂದ ಪ್ರತಿಪಾದಿಸಿದ್ದಾರೆ. ಪ್ರಪಂಚ ಸತ್ಯ, ವಿಷ್ಣುಸರ್ವೋತ್ತಮ. ದೇವ, ಜೀವ, ಜಡ, ಎಲ್ಲದರಲ್ಲೂ ತರತಮತ್ವವಿದೆ ಎಂಬುದು ಈ ಸಿದ್ಧಾಂತದ ಇತರ ಮುಖ್ಯಾಂಶಗಳು.

ಉಡುಪಿಯಲ್ಲಿ ಕೃಷ್ಣನನ್ನು ಪ್ರತಿಷ್ಠೆ ಮಾಡಿದ ಅನಂತರ ಆಲಯದಲ್ಲಿ ಪೂಜೆ ಅವ್ಯಾಹತವಾಗಿ ನಡೆಯುವ ಉದ್ದೇಶದಿಂದ ಆಚಾರ್ಯರು ಪರ್ಯಾಯ ಪದ್ಧತಿಯನ್ನು ಏರ್ಪಡಿಸಿದರು. ಇದು ಈಗಲೂ ನಡೆದು ಬರುತ್ತಿದೆ. ಗುಡಿಯಲ್ಲಿ ಪೂಜೆಯನ್ನೂ ಕೃಷ್ಣಮಠದ ನಿರ್ವಹಣೆಯನ್ನೂ ಎರಡು ವರ್ಷಗಳಿಗೊಮ್ಮೆ ಪರ್ಯಾಯಕ್ರಮದಲ್ಲಿ ಎಂಟು ಮಠಗಳು ಕೈಗೊಳ್ಳುತ್ತವೆ. ಆಚಾರ್ಯರು ಏರ್ಪಡಿಸಿದ್ದ ಅಷ್ಟಮಠಗಳು ಫಲಿಮಾರು, ಆದಮಾರು, ಪುತ್ತಿಗೆ, ಶೀರೊರು, ಕಾಣಿಯೂರು, ಪೇಜಾವರ, ಸೋದೆಮಠಗಳೆಂದು ಪ್ರಸಿದ್ಧವಾಗಿವೆ. ಈ ಎಂಟರಲ್ಲಿ ದ್ವಂದ್ವ ಮಠಗಳೆಂಬ ಕಲ್ಪನೆಯೂ ಉಂಟು. ಅಂತೂ ಕೃಷ್ಣನ ಗುಡಿಯೂ ಕೃಷ್ಣಮಠವೂ ಯಾವೊಂದು ಮಠ ಅಥವಾ ಮಠಾಧೀಶರ ಸ್ವಾಮ್ಯವೂ ಆಗಿರದೆ, ಒಂದೊಂದು ಮಠವೂ ಎರಡು ವರ್ಷಗಳು ಮಾತ್ರ ಅದರ ಅಧಿಕಾರವನ್ನೂ ಹೊಣೆಗಾರಿಕೆಯನ್ನೂ ವಹಿಸಿಕೊಳ್ಳುವುದು ಸ್ವಾರಸ್ಯವಾದ ಪದ್ಧತಿ. ಮೊದಲು ಎರಡು ತಿಂಗಳ ಅವಧಿಯಿದ್ದುದನ್ನು ಎರಡು ವರ್ಷಗಳಿಗೆ ಮಾರ್ಪಡಿಸಿ ಈಗಿನ ಪರ್ಯಾಯದ ವಿವರಗಳನ್ನು ನಿರ್ದೇಶಿಸಿದವರು ಸೋದೆ ಮಠದ ವಾದಿರಾಜರೆಂದು ಪ್ರತೀತಿ ಇದೆ.

ಉಡುಪಿಯ ಎಂಟು ಮಠಗಳಲ್ಲದೆ ಉತ್ತರಾಧಿಮಠ, ವ್ಯಾಸರಾಯಮಠ, ರಾಘವೇಂದ್ರಮಠ, ಮುಳಬಾಗಿಲುಮಠ, ಮಾಧವತೀರ್ಥಮಠ ಮೊದಲಾದ ಇತರ ಮಠಗಳೂ ಮಧ್ವಾಚಾರ್ಯರ ಪರಂಪರೆಗೆ ಸೇರಿವೆ. ಕರ್ನಾಟಕವಲ್ಲದೆ ತಮಿಳುನಾಡು. ಆಂಧ್ರ ಪ್ರದೇಶ, ಮಹಾರಾಷ್ಟ್ರಗಳಲ್ಲೂ ಮಧ್ವಾಚಾರ್ಯರ ಅನುಯಾಯಿಗಳು ಇದ್ದಾರೆ. ಬಂಗಾಲದ ಕಡೆ ಗೌಡೀಯ ಪಂಥದವರಿಗೂ ಮಧ್ವಚಾರ್ಯರು ಗುರುಗಳು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ